Please enable javascript.ರೈತರೂ ಕಟ್ಟಬಹುದು ಕಂಪನಿ - farmer producer company - Vijay Karnataka

ರೈತರೂ ಕಟ್ಟಬಹುದು ಕಂಪನಿ

ವಿಕ ಸುದ್ದಿಲೋಕ | 29 Jun 2016, 9:04 pm
Subscribe

farmer producer company
ರೈತರೂ ಕಟ್ಟಬಹುದು ಕಂಪನಿ

- ಗಜಾನನ ಹೆಗಡೆ ಬೆಟ್ಟಣ್ಣೆ

ಬೆಳೆ ಬೆಳೆಯುವ ರೈತ- ಕೊಳ್ಳುವ ಗ್ರಾಹಕರ 'ನೇರ ವಹಿವಾಟು' ಈಚಿನ ಟ್ರೆಂಡ್‌. ಈ ಮೂಲಕ ಮಾರುಕಟ್ಟೆ ಬೆಲೆಗಿಂತ ಶೇ.15ರಿಂದ 30ರಷ್ಟು ಅಧಿಕ ಆದಾಯ ಪಡೆಯುವ ಅವಕಾಶ ರೈತರದ್ದು. ಅಂಗಡಿ/ ಮಾರುಕಟ್ಟೆ ದರಕ್ಕಿಂತ ಅಗ್ಗದಲ್ಲಿ ಕೃಷಿ ಉತ್ಪನ್ನ ಖರೀದಿಸುವ ಅವಕಾಶ ಗ್ರಾಹಕರದ್ದು.

ಹೀಗೆ ರೈತ- ಗ್ರಾಹಕ ಸಂಬಂಧ ಬೆಸೆಯುವ ಈ ವಹಿವಾಟಿನಲ್ಲಿ ಮಧ್ಯವರ್ತಿಯ ವ್ಯವಹಾರಕ್ಕೆ ಆಸ್ಪದವಿಲ್ಲ. ರೈತ ಕಂಪನಿ (ರೈತ ಉತ್ಪಾದಕರ ಸಂಸ್ಥೆ) ಅಥವಾ 'ಪ್ರೊಡ್ಯೂಸರ್‌ ಕಂಪನಿ'ಯೂ ಇದೇ ಕಲ್ಪನೆಯದ್ದು. ಒಂದಷ್ಟು ರೈತ ಸದಸ್ಯರು ಕಾನೂನಾತ್ಮಕವಾಗಿ ತಮ್ಮದೇ ಕಂಪನಿ ಸ್ಥಾಪಿಸಿಕೊಳ್ಳಬಹುದು. ತಾವು ಬೆಳೆಯುವ ಕೃಷಿ ಉತ್ಪನ್ನಗಳನ್ನು ತಮ್ಮ ಕಂಪನಿ ಮೂಲಕ, ಬ್ರ್ಯಾಂಡ್‌ ನೇಮ್‌ ಅಡಿ ಮಾರಾಟ ಮಾಡಬಹುದು. ಸಂಸ್ಕರಣೆ ಘಟಕ ಸ್ಥಾಪಿಸಿಕೊಳ್ಳಬಹುದು. ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಹೋಲ್‌ಸೇಲ್‌ ದರದಲ್ಲಿ ನೇರವಾಗಿ ತಯಾರಕರಿಂದಲೇ ಖರೀದಿಸಬಹುದು. ವಹಿವಾಟಿನ ಜತೆ ಜತೆಗೆ ರೈತ ಕಂಪನಿ ಬೆಳೆಯುತ್ತದೆ. ರೈತ ಸದಸ್ಯರಿಗೂ ಲಾಭ.

ಪ್ರೊಡ್ಯೂಸರ್‌ ಕಂಪನಿ...

ಪ್ಯೊಡ್ಯೂಸರ್‌ ಸಂಘಟಿತ ಹಾಗೂ ಕಾನೂನು ಮಾನ್ಯತೆ ಇರುವ ವ್ಯವಸ್ಥೆ. ಪ್ರೊಡ್ಯೂಸರ್‌ ಕಂಪನಿ ಒಂದು ರೀತಿಯಲ್ಲಿ ಕಾರ್ಪೋರೇಟ್‌ ಕಂಪನಿಯೇ. ಆದರೆ, ಕಾರ್ಪೋರೇಟ್‌ ಕಂಪನಿಯಂತೆ ಅಲ್ಲ. ರೈತ ಸ್ನೇಹಿ. ಪ್ರೊಡ್ಯೂಸರ್‌ ಕಂಪನಿಯಲ್ಲಿ ಕೃಷಿಕರು (ಪ್ರಾಥಮಿಕ ಉತ್ಪಾದಕರು) ಸದಸ್ಯರಾಗಲು ಅವಕಾಶವಿದೆ. ಆದರೆ, ಊರಿನ ಮುಖಂಡ, ಹಣ ಇರುವವರು ಹಾಗೂ ಪ್ರಭಾವಿಗಳಿಗಿಲ್ಲ. ಪ್ರೊಡ್ಯುಸರ್‌ ಕಂಪನಿಗೆ ಸದಸ್ಯ ಎಷ್ಟು ಬಂಡವಾಳ (ಶೇರಿನ ಮೂಲಕ) ಹಾಕಿದರೂ ಆತನಿಗೆ ಇರುವುದು ಒಂದೇ ಓಟಿನ ಬಲ. ಆದರೆ, ಕಾರ್ಪೋರೇಟ್‌ ಕಂಪನಿಗಳಲ್ಲಿ ಜಾಸ್ತಿ ಶೇರು ಇದ್ದವರಿಗೆ ಹೆಚ್ಚು ಅಧಿಕಾರ ಇರುತ್ತದೆ. ರೈತ ಉತ್ಪಾದಕರ ಕಂಪನಿಯಲ್ಲಿ ಈ ನಿಯಮವಿಲ್ಲ. ಎಲ್ಲ ರೈತ ಸದಸ್ಯರೂ ಸಮಾನ ಹಕ್ಕುದಾರರು. ಹೀಗಾಗಿ ರೈತರು ಮಾತ್ರ ಸದಸ್ಯತ್ವ ಪಡೆಯಲು ಅರ್ಹರು.

ಉತ್ಪನ್ನಗಳನ್ನು ರೈತ ಉತ್ಪಾದಕರ ಸಂಸ್ಥೆ ಮೂಲಕ ಮಾರಾಟ ಮಾಡಿದಾಗ ಬರುವ ಲಾಭಾಂಶವನ್ನು ಸದಸ್ಯರಿಗೆ ಕೊಡಲು ಅವಕಾಶವಿದೆ. ಕಂಪನಿ ಮೂಲಕ ರೈತ ಸದಸ್ಯರು ಹೆಚ್ಚು ಉತ್ಪನ್ನ ಮಾರಾಟ ಮಾಡಿದರೆ ವರ್ಷದ ಅಂತ್ಯದಲ್ಲಿ ಲಾಭಾಂಶ ಪಡೆಯಬಹುದು. ಇದು ರೈತ ಉತ್ಪಾದಕರ ಸಂಸ್ಥೆಯ ವಿಶೇಷಗಳಲ್ಲೊಂದು.

ವಾರ್ಷಿಕವಾಗಿ ಕಂಪನಿಯ ವ್ಯವಹಾರ ಜಾಸ್ತಿ ಇದ್ದರೆ ಸದಸ್ಯರಿಗೆ ಬೋನಸ್‌ ವಿತರಿಸುವ ಸೌಲಭ್ಯವೂ ಇದೆ. ಕೃಷಿ ಉತ್ಪನ್ನಗಳ ಖರೀದಿ, ಉತ್ಪನ್ನಗಳ ಸಂಸ್ಕರಣೆ ಇನ್ನಿತರ ಕೃಷಿ ಪೂರಕ ಕಾರ‍್ಯಕ್ಕೆ ಸದಸ್ಯರಿಗೆ ಕಂಪನಿ ಮೂಲಕ ಸಾಲ ರೂಪದಲ್ಲಿ ಆರ್ಥಿಕ ನೆರವು ನೀಡಬಹುದು. ರೈತ ಉತ್ಪಾದಕರ ಕಂಪನಿ ಸಹಕಾರ ಸಂಘಗಳಿಗಿಂತ ಭಿನ್ನ. 1960 ಸೊಸೈಟಿ ಕಾಯ್ದೆ ಅಡಿ ಸಹಕಾರ ಸಂಘಗಳು ಕಾರ‍್ಯ ನಿರ್ವಹಿಸಿದರೆ, ರೈತ ಉತ್ಪಾದಕರ ಕಂಪನಿ 1956ರ ಕಂಪನಿ ಕಾಯ್ದೆ ಅಡಿ ಕಾರ‍್ಯ ನಿರ್ವಹಿಸುತ್ತವೆ.

ರೈತ ಕಂಪನಿ ರಚನೆ ಹೇಗೆ?

ಉತ್ಪಾದಕರ ಕಂಪನಿ 1956ರ ಕಂಪನಿ ನಿಯಮದ ಅಡಿ ಕಾರ‍್ಯ ನಿರ್ವಹಿಸುತ್ತದೆ. ಸಮಾನ ಮನಸ್ಕರಾದ 10 ಅಥವಾ ಅದಕ್ಕಿಂತ ಹೆಚ್ಚಿನ ರೈತರು, 2 ಅಥವಾ ಹೆಚ್ಚಿನ ಉತ್ಪಾದಕ ಗುಂಪುಗಳು ಒಂದಾಗಿ ಕಂಪನಿ ರಚಿಸಬಹುದು. ರೈತ ಉತ್ಪಾದಕರ ಸಂಸ್ಥೆಗೆ ಕನಿಷ್ಠ 10 ಷೇರುದಾರರು ಅಗತ್ಯ. ಕಂಪನಿಯ ಮೂಲಧನವಾಗಿ ಕನಿಷ್ಠ 1 ಲಕ್ಷ ರೂಪಾಯಿ ಸಂಗ್ರಹ ಮಾಡಬೇಕು. ಮೂಲ ಧನವನ್ನು ಕಂಪನಿಯ ಹೆಸರಲ್ಲಿ ಬ್ಯಾಂಕ್‌ ಖಾತೆ ತೆರೆದು ಡಿಪಾಸಿಟ್‌ ಮಾಡ ಬೇಕು. ಷೇರಿನ ಆಧಾರದಲ್ಲಿ ಕಂಪನಿಗೆ ರೈತ ಸದಸ್ಯರಿಂದ ಬಂಡವಾಳ ಸಂಗ್ರಹಿಸಲು ಅವಕಾಶವಿದೆ. ಷೇರುದಾರ ಸದಸ್ಯರ ಸಂಖ್ಯೆ ಅಂದರೆ, ರೈತ ಸದಸ್ಯರ ಸಂಖ್ಯೆ ಅಧಿಕವಾಗಿದ್ದರೆ ಇದ್ದರೆ ಕಂಪನಿಯ ಬಂಡವಾಳ ಹೆಚ್ಚುತ್ತದೆ.

ಸದಸ್ಯರ ಪೈಕಿ ಕನಿಷ್ಠ 5 ಜನರನ್ನು ಕಂಪನಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕು. ಕಂಪನಿಯ ಗರಿಷ್ಠ ನಿರ್ದೇಶಕರ ಸಂಖ್ಯೆ 15 ಮಾತ್ರ. ಕಂಪನಿಯ ನಿರ್ದೇಶಕ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಮೊದಲ ನಿರ್ದೇಶಕನದು. ಹೀಗೆ ನೇಮಕಗೊಂಡ ನಿರ್ದೇಶಕ ಮಂಡಳಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ಸೇರಬೇಕು. ಕನಿಷ್ಠ 3 ನಿರ್ದೇಶಕರು ಪಾಲ್ಗೊಳ್ಳುವುದು ಕಡ್ಡಾಯ. ಒಮ್ಮೆ ಆಯ್ಕೆಗೊಂಡ ನಿರ್ದೇಶಕರ ಅವಧಿ 5 ವರ್ಷ. ಬಳಿಕ ಪುನಾರಾಯ್ಕೆ, ಬದಲಾವಣೆ ಮಾಡಿಕೊಳ್ಳಬಹುದು.

ರೈತರು ಬೆಳೆದ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಬೆಲೆ ನಿಗದಿ, ಕಂಪನಿಯ ಬೈಲಾ ರೂಪಿಸುವುದು, ವ್ಯವಹಾರದ ಗುರಿ ನಿಗದಿ ಪಡಿಸುವುದು, ಲಾಭಾಂಶ ಹಂಚಿಕೆ, ಹೊಸ ಷೇರುದಾರರ ನೇಮಕ, ಆಡಳಿತಾತ್ಮಕ ಸಿಬ್ಬಂದಿ ನೇಮಕ, ಲೆಕ್ಕಪತ್ರ ನಿರ್ವಹಣೆ ಇವೆಲ್ಲ ನಿರ್ದೇಶಕ ಮಂಡಳಿಯ ಜವಾಬ್ದಾರಿ.

ಈ ರೈತ ಕಂಪನಿಗೆ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ(ಸಿಇಒ) ನೇಮಿಸಿಕೊಳ್ಳಲು ಅವಕಾಶವಿದೆ. ಸಿಇಒ ನೇಮಕ ಮಾಡುವ ಅಧಿಕಾರ ನಿರ್ದೇಶಕ ಮಂಡಳಿಗೆ ಇರುತ್ತದೆ. ಸಿಇಒ ಕಂಪನಿಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ದಿನ ನಿತ್ಯದ ವ್ಯವಹಾರಗಳಿಗೆ ಸಿಇಒ ಮಾರ್ಗದರ್ಶನ ನೀಡುತ್ತಾರೆ. ಅಲ್ಲದೇ ಕಂಪನಿ ನಿರ್ವಹಣೆಯಲ್ಲಿ ಸಿಇಒ ಪಾತ್ರ ಮಹತ್ವದ್ದು. ಸಿಇಒ ಕಂಪನಿಯ ಆಡಳಿತ ಮಂಡಳಿಯ ಪದನಿಮಿತ್ತ ನಿರ್ದೇಶಕರೂ ಹೌದು.

ಉತ್ಪಾದಕರ ಕಂಪನಿ ಮೂಲಕ ರೈತ ಸದಸ್ಯರ ಉತ್ಪಾದನೆ ಮಾರಾಟ, ಕೃಷಿ ಉತ್ಪನ್ನಗಳ ಕೊಯ್ಲು, ಸಂಗ್ರಹಣೆ, ವಿಂಗಡಣೆ, ಪ್ಯಾಕಿಂಗ್‌, ಮಾರುಕಟ್ಟೆ ಹುಡುಕುವುದು, ರಫ್ತು, ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದು. ಅಲ್ಲದೇ ಸದಸ್ಯರಿಗೆ ಅಗತ್ಯ ಕೃಷಿ ಉಪಕರಣಗಳನ್ನು, ಬೀಜ, ಗೊಬ್ಬರವನ್ನು ಕಂಪನಿ ಮೂಲಕ ಒದಗಿಸಬಹುದು.

ಕಂಪನಿ ನೋಂದಣಿ ಪ್ರಕ್ರಿಯೆ

ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ ಅವರು ರೈತ ಉತ್ಪಾದಕ ಕಂಪನಿಯ ನೋಂದಣಿ ಮಾಡುತ್ತಾರೆ. ಬೆಂಗಳೂರಿನಲ್ಲಿ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ ಕಚೇರಿಯಿದೆ. ಪ್ರೊಡ್ಯೂಸರ್‌ ಕಂಪನಿ ನೋಂದಣಿ ಮಾಡಲು ಹಲವು ದಾಖಲೆಗಳು ಬೇಕು. ಕಂಪನಿಯ ನಿರ್ದೇಶಕರ ಫೋಟೋ, ವಿಳಾಸ ಹಾಗೂ ಪ್ಯಾನ್‌ಕಾರ್ಡ್‌ ನೀಡಿ, ಡೈರೆಕ್ಟರ್‌ ಇಡೆಂಟಿಫಿಕೇಷನ್‌ ನಂಬರ್‌ (ಡಿಐಎನ್‌) ಪಡೆಯಬೇಕು. ಕಂಪನಿಯ ಹೆಸರು ನೋಂದಣಿ ಮಾಡಿಸಬೇಕು. ಕಾಗದಪತ್ರಗಳು ಸರಿಯಾಗಿದ್ದರೆ ಸುಮಾರು 30 ದಿನಗಳ ಅವಧಿಯಲ್ಲಿ ಕಂಪನಿ ನೋಂದಣಿ ಅಧಿಕೃತವಾಗಿ ಆಗುತ್ತದೆ. ಪ್ರೊಡ್ಯುಸರ್‌ ಕಂಪನಿಗೆ ಟಿಎಎನ್‌- ಪ್ಯಾನ್‌ ಸಂಖ್ಯೆ, ಮಳಿಗೆ (ವೆಂಡರ್‌) ಪರವಾನಗಿ ಅಗತ್ಯ. ವ್ಯಾಟ್‌ ನೋಂದಣಿ ಮಾಡಿಸಬೇಕು. ಈ ಎಲ್ಲ ಪ್ರಕ್ರಿಯೆ ಪೂರೈಸಿದ ಬಳಿಕ ಪ್ರೊಡ್ಯುಸರ್‌ ಕಂಪನಿ ಆಡಳಿತಾತ್ಮಕವಾಗಿ, ಕಾನೂನಾತ್ಮಕವಾಗಿ ಕಾರ‍್ಯ ನಿರ್ವಹಣೆ ಮಾಡಲು ಸಾಧ್ಯ. ಕಂಪನಿ ನೋಂದಣಿಯಾದ 90 ದಿನಗಳ ಒಳಗೆ ವಾರ್ಷಿಕ ಸರ್ವ ಸಾಧಾರಣ ಸಭೆ ಆಯೋಜಿಸಬೇಕು. ಸಭೆಗೆ ಒಟ್ಟು ಸದಸ್ಯರ ಪೈಕಿ 1/4ರಷ್ಟು ಸದಸ್ಯರ ಉಪಸ್ಥಿತಿ ಬೇಕು.

ರೈತರೇ ಮಾಲೀಕರು

ರೈತ ಉತ್ಪಾದಕ ಕಂಪನಿ 1956ರ ಕಂಪನಿ ಕಾಯ್ದೆ ಅಡಿ ಕಾರ‍್ಯ ನಿರ್ವಹಿಸುತ್ತವೆ. ಶೇರುದಾರ ಸದಸ್ಯರೇ ರೈತ ಉತ್ಪಾದಕ ಕಂಪನಿಯ ಮಾಲೀಕರಾಗಿರುವುದು ವಿಶೇಷ. ರೈತ ಉತ್ಪಾದಕ ಸಂಸ್ಥೆ ಕಾರ್ಪೋರೇಟ್‌ ಕಂಪನಿಯಂತೆಯೇ ಕಾರ‍್ಯ ನಿರ್ವಹಣೆ ಮಾಡುತ್ತವೆ. ರೈತ ಕಂಪನಿಯ ವಹಿವಾಟಿನ ಲಾಭವನ್ನು ಶೇರುದಾರ ಸದಸ್ಯರಿಗೆ ಹಂಚಿಕೆ ಮಾಡಲು ಅವಕಾಶವಿದೆ. ಕೃಷಿ ಪರಿಕರ ಮಾರಾಟ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಉತ್ಪನ್ನಗಳ ರಫ್ತು ಮತ್ತು ಆಮದು ಪ್ರಕ್ರಿಯೆ ಕೈಗೊಳ್ಳಬಹುದು. ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬೇಕಾದ ವಸ್ತು, ಉಪಕರಣಗಳನ್ನು ನೇರವಾಗಿ ಆಯಾ ಕಂಪನಿಯಿಂದ ಖರೀದಿಸಿ ಮಾರಾಟ ಮಾಡುವ ಅಧಿಕಾರ ರೈತ ಉತ್ಪಾದಕರ ಸಂಸ್ಥೆಗಿರುತ್ತದೆ.

ಎಲ್ಲರಿಗೂ ಸಮಾನ ಹಕ್ಕು

ಕಂಪನಿಯ 1 ಶೇರಿನ ಬೆಲೆ 10 ರೂಪಾಯಿ ಎಂದಿಟ್ಟುಕೊಳ್ಳಿ. ಸದಸ್ಯರಾಗುವ ರೈತರು ಎಷ್ಟು ಬೇಕಾದರೂ ಶೇರು ಪಡೆಯಬಹುದು. ಆದರೆ, ಅಧಿಕ ಶೇರು ಖರೀದಿಸಿದ ರೈತರಿಗೆ ಹೆಚ್ಚಿನ ಅಧಿಕಾರವೇನೂ ಇಲ್ಲ. ಎಲ್ಲ ರೈತರೂ ಸಮಾನ ಹಕ್ಕುದಾರರಾಗಿರುತ್ತಾರೆ. ವರ್ಷಕ್ಕೊಮ್ಮೆ ಕಂಪನಿಯ ಸರ್ವ ಸಾಧಾರಣ ಸಭೆ ಕರೆದು ಕಂಪನಿಯ ವಹಿವಾಟು, ಚಟುವಟಿಕೆಗಳ ಕುರಿತು ಚರ್ಚೆಗೆ ಅವಕಾಶವಿರುತ್ತದೆ.
ವಾರ್ಷಿಕ ಸಭೆಗೆ ಎಲ್ಲ ಸದಸ್ಯರನ್ನೂ ಆಧಿಹ್ವಾನಿಧಿಸಧಿಲಾಧಿಗುಧಿತ್ತಧಿದೆ.

ಉತ್ಪಾದಕ ಕಂಪನಿಗಳ ಸುಗ್ಗಿ

ರೈತರು ನೇರವಾಗಿ ಖಾಸಗಿ ಕಂಪನಿಗಳಿಂದ ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಅವಕಾಶ ನೀಡುವ, ಸಂಸ್ಕರಣೆ ಘಟಕ ಸ್ಥಾಪಿಸಲು, ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಮಾಡಿಕೊಡುವ ರೈತ ಉತ್ಪಾದಕ ಸಂಸ್ಥೆ (ಫಾರ್ಮರ್‌ ಪ್ರೊಡ್ಯೂಸರ್‌ ಆರ್ಗನೈಸೇಶನ್‌ ಧಿ-ಎಫ್‌ಪಿಒ) ರಚನೆ ಪ್ರಕ್ರಿಯೆ ಬಿರುಸಿನಿಂದ ನಡೆದಿದೆ. 98 ರೈತ ಕಂಪನಿ(ಸಂಸ್ಥೆ)ಗಳು ಈಗಾಗಲೇ ನೋಂದಣಿಯಾಗಿದ್ದು, ಇನ್ನೂ 174 ಕಂಪನಿಗಳ ನೋಂದಣಿ ಪ್ರಗತಿಯಲ್ಲಿದೆ. ತೋಟಗಾರಿಕೆ ಇಲಾಖೆ ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 92 ಎಫ್‌ಪಿಒ ಸ್ಥಾಪನೆಗೆ ಮುಂದಾಗಿದ್ದರೆ, ನಬಾರ್ಡ್‌ 180 ಎಫ್‌ಪಿಒ ರಚನೆಗೆ ಮಂಜೂರಾತಿ ನೀಡಿದೆ. ಕೇಂದ್ರ ಸರಕಾರದ ಕೃಷಿ ಮತ್ತು ಸಹಕಾರ ಇಲಾಖೆಯ ಆರ್ಥಿಕ ನೆರವಿನೊಂದಿಗೆ ರಾಜ್ಯದಲ್ಲಿ ತೋಟಗಾರಿಕೆ ಇಲಾಖೆ 'ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ' ರಚಿಸುತ್ತಿದೆ. ತೋಟಗಾರಿಕೆ ಇಲಾಖೆಯಿಂದ ಈಗಾಗಲೇ 58 ಎಫ್‌ಪಿಒ ನೋಂದಣಿಯಾಗಿದೆ. 34 ಎಫ್‌ಪಿಒ ನೋಂದಣಿ ಪ್ರಕ್ರಿಯೆ ಚಾಲನೆಯಲ್ಲಿದೆ. ಇದಲ್ಲದೇ ಕೇಂದ್ರ ಸರಕಾರದ ನೆರವಿನಿಂದ ನಬಾರ್ಡ್‌ ರಾಜ್ಯದಲ್ಲಿ ಒಟ್ಟು 180 ರೈತ ಕಂಪನಿ ರಚನೆ ಮಾಡುತ್ತಿದೆ. ಈ ಪೈಕಿ 40 ರೈತ ಕಂಪನಿ ನೋಂದಣಿಯಾಗಿದೆ. ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳನ್ನು ಅನುಷ್ಠಾನ ಏಜೆನ್ಸಿಯಾಗಿ ನೇಮಿಸಲಾಗಿದೆ. ಎಫ್‌ಪಿಒ ನೋಂದಣಿ ಮತ್ತು ಆರಂಭಿಕ ನಿರ್ವಹಣೆಗಾಗಿ ತೋಟಗಾರಿಕೆ ಇಲಾಖೆ ಮತ್ತು ನಬಾರ್ಡ್‌ ತನ್ನ ಯೋಜನೆಯ ನಿಯಮಗಳ ಪ್ರಕಾರ ಆಯಾ ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ, ಬ್ಯಾಂಕ್‌ಗಳನ್ನು ಅನುಷ್ಠಾನ ಏಜೆನ್ಸಿಯಾಗಿ ನೇಮಿಸಿದೆ. ಅನುಷ್ಠಾನ ಏಜೆನ್ಸಿಗಳು ಮೊದಲ ಮೂರು ವರ್ಷಗಳ ಕಾಲ ಎಫ್‌ಪಿಒಗೆ ತಾಂತ್ರಿಕ ನೆರವು ನೀಡಲಿವೆ. ನಬಾರ್ಡ್‌ ಮತ್ತು ತೋಟಗಾರಿಕೆ ಇಲಾಖೆ ಪ್ರತ್ಯೇಕವಾಗಿ ಎಫ್‌ಪಿಒ ರಚನೆ ಮಾಡುತ್ತಿದೆ. ಒಂದು ಎಫ್‌ಪಿಒಗೆ ನಬಾರ್ಡ್‌ 3 ವರ್ಷಗಳ ಅವಧಿಯಲ್ಲಿ 9 ಲಕ್ಷ ರೂಪಾಯಿ ಅನುದಾನ ನೀಡಲಿದೆ. ಇದಲ್ಲದೇ ರೈತ ಸದಸ್ಯರಿಂದ ಶೇರು ಹಣ ಸಂಗ್ರಹಿಸಲಾಗುತ್ತದೆ.

9ರಿಂದ 10 ಹಳ್ಳಿಗಳ 1000 ರೈತರನ್ನು ಎಫ್‌ಪಿಒಗೆ ಸದಸ್ಯರನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಸದಸ್ಯತ್ವ ಪಡೆಯಲು ಪ್ರತಿ ರೈತ (ಶೇರು ಹಣ 1000 ರೂಪಾಧಿಯಿ ಹಾಗೂ ನೋಂದಣಿ ಶುಲ್ಕ 100 ರೂ.) 1100 ರೂ.ಗಳನ್ನು ನೀಡಬೇಕು. ಸಾವಿರ ರೈತರಿಂದ 10 ಲಕ್ಷ ರೂ. ಶೇರು ಹಣ ಸಂಗ್ರಹವಾಗುತ್ತದೆ. ಇದಲ್ಲದೇ ಕೇಂದ್ರ ಸರಕಾರ ಅಧೀನದ ಸಣ್ಣ ರೈತರ ಒಕ್ಕೂಟ 10 ಲಕ್ಷ ರೂ. ನೆರವು ನೀಡುತ್ತದೆ. ಒಟ್ಟು 20 ಲಕ್ಷ ರೂ. ಬಂಡವಾಳದೊಂದಿಗೆ ರೈತರ ಕಂಪನಿ ಕಾರ‍್ಯ ನಿರ್ವಹಿಸುಧಿತ್ತದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟೆ ತಿಳಿಸುತ್ತಾರೆ.

ಬಸವಸಾಗರ ಪ್ರೊಡ್ಯೂಸರ್‌ ಕಂಪನಿ

ಸಜ್ಜಲಶ್ರೀ ಸಮಗ್ರ ಕೃಷಿ ಅಧ್ಯಯನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಲಿಂಗಸೂಗೂರು ತಾಲೂಕಿನಲ್ಲಿ 'ಬಸವ ಸಾಗರ ಪ್ರೊಡ್ಯೂಸರ್‌ ಕಂಪನಿ' ರಚಿಸುತ್ತಿದೆ. ಬೆಂಡೋಣಿ ಗ್ರಾಮ ಈ ಕಂಪನಿಯ ಕೇಂದ್ರ ಸ್ಥಾನ. ನಂದಿಹಾಳ, ರಾಮಪುರ, ತೊರಲಬೆಂಚಿ, ಮರಗಂಟನಾಳ, ಮೆಟ್ಟೆಕಲ್ಲೂರು, ಗುಡಿಹಾಳ ಗ್ರಾಮಗಳ 476 ರೈತರು(ಉತ್ಪಾದಕರು) ಷೇರು ಸದಸ್ಯರಾಗಿದ್ದಾರೆ. ಆ ಭಾಗದಲ್ಲಿ ಪ್ರಸಿದ್ಧವಾಗಿರುವ ಸೋನಾ ಮಸೂರಿ ಭತ್ತವನ್ನು ನೇರ ಮಾರಾಟ ಮಾಡುವುದು ಕಂಪನಿಯ ಮೂಲ ಉದ್ದೇಶ. 1 ಸಾವಿರ ರೈತ ಸದಸ್ಯರನ್ನು ನೋಂದಣಿ ಮಾಡುವ ಗುರಿ ಸಜ್ಜಲಶ್ರೀ ಸಮಗ್ರ ಕೃಷಿ ಅಧ್ಯಯನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯದ್ದು. ಪ್ರತಿ ಸದಸ್ಯರಿಂದ 250 ರೂ. ಸದಸ್ವತ್ವ ಶುಲ್ಕ ಮತ್ತು ಶೇರು ಹಣವಾಗಿ 1 ಸಾವಿರ ರೂ. ಸಂಗ್ರಹಿಸಲಾಗಿದೆ. ಈ ಹಣ ಕಂಪನಿಯ ಕಾರ‍್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಹೆಚ್ಚಿನ ಮಾಹಿತಿಗೆ 'ಬಸವ ಸಾಗರ ಪ್ರೊಡ್ಯೂಸರ್‌ ಕಂಪನಿ'ಯ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ ಶಶಿಧರ ಕನ್ನಾಳ ಅವರ ಮೊ.9945472034.

ಸಹಜ ಸಮೃದ್ಧ ಆಗ್ರ್ಯಾನಿಕ್‌ ಪ್ರೊಡ್ಯೂಸರ್‌ ಕಂಪನಿ

ಬೆಂಗಳೂರು ಮೂಲದ 'ಸಹಜ ಸಮೃದ್ಧ' ಬಳಗ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು 2010ರಲ್ಲಿ 'ಸಹಜ ಸಮೃದ್ಧ ಆಗ್ರ್ಯಾನಿಕ್‌ ಪ್ರೊಡ್ಯೂಸರ್‌ ಕಂಪನಿ' ಸ್ಥಾಧಿಪಿಧಿಸಿಧಿದೆ. ಸಾವಯವ ರೈತರು ಮತ್ತು ರೈತ ಗುಂಪುಗಳಿಂದ ನಿರ್ಮಾಣಗೊಂಡ ಕಂಪನಿಯಲ್ಲಿ ಒಟ್ಟು 1500 ಸದಸ್ಯರಿದ್ದಾರೆ. ಸಾವಯವ ಉತ್ಪನ್ನ ಬೆಳೆಯುವ ರೈತರು ಕಂಪನಿಯ ನಿಯಮಗಳ ಪ್ರಕಾರ ಶೇರು ಸದಸ್ಯರಾಗಿದ್ದು, ಲಾಭವನ್ನೂ ಪಡೆಯುತ್ತಾರೆ. ಈ ರೈತ ಕಂಪನಿಯ ಹಾಲಿ ಮಾಸಿಕ ವಹಿವಾಟು 55 ಲಕ್ಷ ರೂಪಾಯಿಗೂ ಅಧಿಕ. ಸಾವಯವ ಪ್ರಮಾಣೀಕರಣ ಹೊಂದಿರುವ, ಕಂಪನಿಯ ಸದಸ್ಯರಾದ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಹಾಗೂ 20 ರೈತ ಗುಂಪುಗಳಿಂದ ಖರೀದಿಸಿದ ಉತ್ಪನ್ನಗಳನ್ನು ಸಹಜ ಸಮೃದ್ಧ ಕಂಪನಿ ರಾಜ್ಯ ಹಾಗೂ ಹೊರ ರಾಧಿಜ್ಯದ ಸಾವಯವ ಮಳಿಗೆ ಹಾಗೂ ಗ್ರಾಹಕರಿಗೆ ತಲುಪಿಸುತ್ತಿದೆ. 20 ರೈತ ಗುಂಪುಗಳೂ ಕಂಪನಿಯ ಶೇರುದಾರರು. ಈವರೆಗೆ ಕಂಪನಿಗೆ ರೈತ ಸದಸ್ಯರಿಂದ 20 ಲಕ್ಷ ರೂ. ಶೇರು ಬಂಡವಾಳ ಸಂಗ್ರಹವಾಗಿದೆ. ಇದಲ್ಲದೇ ಕಂಪನಿ ವಹಿವಾಟಿಗೆ ನಬಾರ್ಡ್‌ ನಿಂದ 32 ಲಕ್ಷ ರೂ. ಸಾಲ ಪಡೆದು ಮರುಪಾವತಿ ಮಾಡಲಾಗಿದೆ. ಕಂಪನಿಯಲ್ಲಿ ಸಿಇಒ ಸೇರಿದಂತೆ 20 ನೌಕರರಿದ್ದಾರೆ. ಹೆಚ್ಚಿನ ಮಾಹಿತಿಗೆ ಸಹಜ ಸಮೃದ್ಧ ಆಗ್ರ್ಯಾನಿಕ್‌ ಪ್ರೊಡ್ಯೂಸರ್‌ ಕಂಪನಿಯ ಮೊ.7483088144.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ