Please enable javascript.Congress,ಮೋದಿ ಅಲೆಗೆ ರಾಜ್ಯ ಕಾಂಗ್ರೆಸ್‌ ಧೂಳೀಪಟ: ಸ್ವಯಂಕೃತ ಅಪರಾಧದಿಂದಲೂ ಕುಸಿದ ಕೈಪಕ್ಷ - coalition not work in lokasaba election - Vijay Karnataka

ಮೋದಿ ಅಲೆಗೆ ರಾಜ್ಯ ಕಾಂಗ್ರೆಸ್‌ ಧೂಳೀಪಟ: ಸ್ವಯಂಕೃತ ಅಪರಾಧದಿಂದಲೂ ಕುಸಿದ ಕೈಪಕ್ಷ

Vijaya Karnataka | 24 May 2019, 10:02 am
Subscribe

ತುಮಕೂರಿನಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ನೀಡದಿರುವುದು, ಮಂಡ್ಯದ ಕಿಚ್ಚನ್ನು ಆರಿಸದಿರುವುದು , ಬೇರು ಮಟ್ಟದಲ್ಲಿ ದೋಸ್ತಿ ...

2205-2-2-04
ಶಶಿಧರ ಹೆಗಡೆ,ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಸ್ವಯಂಕೃತ ಅಪರಾಧದಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಧೂಳೀಪಟವಾಗಿದೆ. ಈ ಹೊಡೆತದ ತೀವ್ರತೆಗೆ ಪಕ್ಷದ ಘಟಾನುಘಟಿಗಳೇ ತರಗೆಲೆಗಳಂತೆ ಉದುರಿ ಹೋಗಿದ್ದು ಕೇವಲ 2 ಸ್ಥಾನಗಳಿಗೆ ಕಾಂಗ್ರೆಸ್‌ ಸೀಮಿತಗೊಂಡಿದೆ.

ಲೋಕಸಭೆ ಚುನಾವಣೆಯಲ್ಲಿ ಹಿಂದೆಂದೂ ಇಂತಹ ಹೀನಾಯ ಸೋಲನ್ನು ರಾಜ್ಯ ಕಾಂಗ್ರೆಸ್‌ ಕಂಡಿರಲಿಲ್ಲ. ಇದರಲ್ಲಿ ಮೋದಿ ಅಲೆಯ ಪ್ರಧಾನ ಪಾತ್ರವಿದೆ. ಜತೆಗೆ ಸೆರಗಿನ ಕೆಂಡದಂತೆ ಜೆಡಿಎಸ್‌ ಪಕ್ಷವನ್ನು ಬೆನ್ನಿಗಿಟ್ಟಿಕೊಂಡಿರುವುದೂ ಈ ಪರಾಭವಕ್ಕೆ ಧಾರಾಳ ಕೊಡುಗೆ ಸಲ್ಲಿಸಿದೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಮುಖಂಭಂಗವಾಗಿದೆ. ಸೋಲಿಲ್ಲದ ಸರದಾರರೆನಿಸಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ ಅಂಥವರೂ ಸೋಲುಂಡಿದ್ದಾರೆ. ಇದು ಕಾಂಗ್ರೆಸ್‌ನ ದಯನೀಯ ಸ್ಥಿತಿಯನ್ನು ಬಿಂಬಿಸುವಂತಿದೆ.

ರಾಜ್ಯದಲ್ಲಿ 1998ರ ಪಾರ್ಲಿಮೆಂಟ್‌ ಎಲೆಕ್ಷನ್‌ನಿಂದಲೂ ಬಿಜೆಪಿ ಮುನ್ನಡೆಯ ಹಾದಿಯಲ್ಲಿತ್ತು. ಅಲ್ಲಿಂದಲೇ ಕಾಂಗ್ರೆಸ್‌ನ ಇಳಿಜಾರು ಪಯಣವೂ ಶುರುವಾಗಿತ್ತು. 2004, 2009 ಮತ್ತು 2014ರಲ್ಲಿ ಕಾಂಗ್ರೆಸ್‌ ಎರಡಂಕಿ ತಲುಪಿಲ್ಲ. 1996, 1998ರಲ್ಲೂ ಒಂದಂಕಿಯಲ್ಲೇ ಗಿರಕಿ ಹೊಡೆದಿದೆ. 1996ರಲ್ಲಿ 5 ಕ್ಷೇತ್ರಗಳಲ್ಲಿ ಗೆದ್ದದ್ದು ಕಾಂಗ್ರೆಸ್‌ನ ಈವರೆಗಿನ ಕಳಪೆ ಸಾಧನೆಯಾಗಿತ್ತು.

ಈ ಬಾರಿಯ ಚುನಾವಣೆಗೆ ಮುನ್ನ ತುಸು ವಿಶ್ವಾಸದಲ್ಲೆ ಇದ್ದ ಕಾಂಗ್ರೆಸ್‌ನ ಮುಂಚೂಣಿ ನಾಯಕರು ಅತ್ಯಧಿಕ ಕ್ಷೇತ್ರಗಳಲ್ಲಿ ಜಯ ದಾಖಲಿಸುವ ಉತ್ಸಾಹ ತೋರಿದ್ದು ನಿಜ. ಜೆಡಿಎಸ್‌ನೊಂದಿಗಿನ ಮೈತ್ರಿ ಒಂದು ಪ್ರಮಾಣದಲ್ಲಿ ಕೈಹಿಡಿಯುವ ಭರವಸೆಯೂ ಇತ್ತು. ಚುನಾವಣೆ ಸಮೀಪಿಸುತ್ತಿದ್ದಂತೆ ಸೀಟು ಹೊಂದಾಣಿಕೆ ಪ್ರಯಾಸಕರವಾಯಿತು. ಕೆಳಹಂತದ ಮುಖಂಡರು, ಕಾರ್ಯಕರ್ತರು ದೋಸ್ತಿಯನ್ನು ವಿರೋಧಿಸಿದರು. ಅಲ್ಲಿಂದ ಪ್ರಾರಂಭವಾದ ಗೊಂದಲ ಮತದಾನದ ದಿನದ ವರೆಗೂ ಇತ್ಯರ್ಥಗೊಳ್ಳಲಿಲ್ಲ. ಪ್ರದೇಶ ಕಾಂಗ್ರೆಸ್‌ನ ನಾಯಕರು ಜೆಡಿಎಸ್‌ ವರಿಷ್ಠರೊಂದಿಗೆ ವೇದಿಕೆ ಹಂಚಿಕೊಂಡು ಒಗ್ಗಟ್ಟಿನ ಸಂದೇಶ ರವಾನಿಸುವ ಕಸರತ್ತು ನಡೆಸಿದರು. ಆದರೆ, ಕೊನೆಯ ವರೆಗೂ ಬೇರುಮಟ್ಟದ ಕಾರ್ಯಕರ್ತರು ಮಿತ್ರಪಕ್ಷದೊಂದಿಗೆ ಕೆಲಸ ಮಾಡಲೇ ಇಲ್ಲ. ಇದರ ಪರಿಣಾಮ ಶೋಚನೀಯ ಸ್ಥಿತಿಗೆ ಕಾಂಗ್ರೆಸ್‌ ತಲುಪಿದೆ. ಹಾಗಾಗಿ ಜೆಡಿಎಸ್‌ನೊಂದಿಗಿನ ಅಪ್ಪುಗೆ ‘ಧೃತರಾಷ್ಟ್ರಾಲಿಂಗನ’ದಂತೆ ಕಾಂಗ್ರೆಸ್‌ನವರಿಗೆ ಭಾಸವಾಗಿದೆ.

ವಾಸ್ತವದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಜಂಟಿಯಾಗಿ ಚುನಾವಣೆಗೆ ಹೋಗುವುದು ಆತ್ಮಹತ್ಯೆಗೆ ಸಮಾನವೆನ್ನುವುದು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಅರಿವಿತ್ತು. ಹಳೆ ಮೈಸೂರು ಭಾಗದಲ್ಲಿ ಪಾರಂಪರಿಕ ಎದುರಾಳಿ ಜೆಡಿಎಸ್‌ ಜತೆಗೆ ಕೈಮಿಲಾಯಿಸುವುದು ಅಪಾಯಕಾರಿ ಎಂಬುದೂ ಗೊತ್ತಿತ್ತು. ಪ್ರದೇಶ ಕಾಂಗ್ರೆಸ್‌ ನಾಯಕರು ಈ ಸೂಕ್ಷ್ಮವನ್ನು ಹೈಕಮಾಂಡ್‌ಗೆ ಹೇಳಿಯೂ ಇದ್ದರು. ಆದರೆ, ರಾಷ್ಟ್ರದಲ್ಲಿ ಮಹಾಮೈತ್ರಿಕೂಟದ ಸೌಧ ಕಟ್ಟಲು ಕರ್ನಾಟಕದ ಮೈತ್ರಿ ಅಡಿಪಾಯವೆಂದು ಹೈಕಮಾಂಡ್‌ನವರು ಬಗೆದಿದ್ದರು. ಈ ಉದ್ದೇಶಕ್ಕೆ ಅಡಿಗಲ್ಲು ಹಾಕಲು ತೋಡಲಾಗಿದ್ದ ಪಾಯದಲ್ಲೀಗ ಕಾಂಗ್ರೆಸ್‌ ಭವಿಷ್ಯವೇ ಮಗುಚಿ ಬಿದ್ದಿದೆ.

ಪರಸ್ಪರ ಅಪನಂಬಿಕೆಯಿಂದ ಅಖಾಡಕ್ಕೆ ಇಳಿದಿದ್ದರೂ ಇಷ್ಟೊಂದು ಅವಮಾಕರ ಸೋಲನ್ನು ದೋಸ್ತಿಗಳಿಬ್ಬರೂ ನಿರೀಕ್ಷಿಸಿರಲಿಲ್ಲ. ಎಲ್ಲ ಗೋಜಲಿನ ಮಧ್ಯೆಯೂ ಕನಿಷ್ಠ 10 ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇತ್ತು. ಹೈದರಾಬಾದ್‌ ಕರ್ನಾಟಕದಲ್ಲಿ ಈ ಬಾರಿಯೂ ಮತದಾರರು ಕೈಹಿಡಿಯುತ್ತಾರೆಂದು ಪಕ್ಷದ ನಾಯಕರು ಎಣಿಸಿದ್ದರು. ಆದರೆ, ಮೋದಿ ಅಲೆ ಎಲ್ಲವನ್ನೂ ತಲೆಕೆಳಗು ಮಾಡಿ ಕಾಂಗ್ರೆಸ್‌ ಪಕ್ಷವನ್ನು ರಸಾತಳಕ್ಕೆ ನೂಕಿದೆ. 2014ರಲ್ಲಿ ಮೋದಿ ಅಲೆ ಬರಿಗಣ್ಣಿಗೆ ಗೋಚರಿಸುವಂತಿತ್ತು. ಈ ಚುನಾವಣೆಯಲ್ಲಿ ಅದು ಅಂತರ್‌ ಪ್ರವಾಹದಂತೆ ಇದ್ದದ್ದನ್ನು ಕೈನಾಯಕರು ಗುರುತಿಸಲಾರದೇ ಹೋದರು. ಒಂದೆಡೆ ಮೋದಿ ವರ್ಚಸ್ಸು ಮತ್ತೊಂದೆಡೆ ಮೈತ್ರಿಯ ಯಡವಟ್ಟಿನಿಂದ ಕೊಚ್ಚಿ ಹೋಗುವಂತಾಗಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದರೂ 5 ರಿಂದ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಭರವಸೆ ಇಟ್ಟುಕೊಳ್ಳಬಹುದಿತ್ತು. ತುಮಕೂರಿನಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ನೀಡದಿರುವುದು, ಮಿತ್ರಪಕ್ಷ ಜೆಡಿಎಸ್‌ಗೆ ಗಟ್ಟಿ ನೆಲೆಯೇ ಇಲ್ಲದ ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ವಿಜಯಪುರವನ್ನು ತ್ಯಾಗ ಮಾಡಿರುವುದು ಹಾಗೂ ಮಂಡ್ಯದ ಧಾವಾನಲವನ್ನು ಆರಿಸದಿರುವುದು ಕಾಂಗ್ರೆಸ್‌ಗೆ ತಿರುಗು ಬಾಣವಾಗಿ ಪರಿಣಮಿಸಿತು. ಇದರಿಂದ ಆಗಿರುವ ಆಘಾತದಿಂದ ಚೇತರಿಸಿಕೊಳ್ಳುವುದೂ ಕಾಂಗ್ರೆಸ್‌ಗೆ ಸವಾಲಾಗಲಿದೆ.

ಕಳೆದ ಬಾರಿಯೂ ಮೋದಿ ಅಲೆ ನಡುವೆ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಿಸಿತ್ತು. ನಾನಾ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಿಂದಲೇ ಹೆಚ್ಚು ಸಂಸದರು ಆಯ್ಕೆಯಾಗಿದ್ದರು. ಅದು ಅಂದಿನ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಉಳಿಸಿತ್ತು. ಆದರೆ, ಈ ಬಾರಿಯ ಫಲಿತಾಂಶ ಕಾಂಗ್ರೆಸ್‌ನ ನೈತಿಕ ಸ್ಥೈರ್ಯವನ್ನೇ ಕಸಿದುಕೊಂಡಿದೆ.

ವೈಭವದ ದಿನಗಳು

ಸ್ವತಂತ್ರ ಭಾರತದ ಮೊದಲ ಚುನಾವಣೆಯಿಂದ 1991ರವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಜಯಭೇರಿ ಮೊಳಗಿಸಿಕೊಂಡು ಬಂದಿತ್ತು. ತುರ್ತು ಪರಿಸ್ಥಿತಿ ನಂತರ 1977ರಲ್ಲಿ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ಇಂದಿರಾ ಗಾಂಧಿ ವಿರೋಧಿ ಅಲೆಯಿದ್ದರೂ ರಾಜ್ಯದ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ದಾಖಲಿಸಿತ್ತು. ನಂತರ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಮೊದಲ ಕಾಂಗ್ರೆಸೇತರ ಸರಕಾರವಿದ್ದರೂ 1984ರಲ್ಲಿ 24 ಕ್ಷೇತ್ರಗಳನ್ನು ಕಾಂಗ್ರೆಸ್‌ ಬಾಚಿಕೊಂಡಿತ್ತು. ಇದರ ಹಿಂದೆ ಇಂದಿರಾ ಗಾಂಧಿ ಹತ್ಯೆಯ ಅನುಕಂಪದ ಅಲೆಯೂ ಇತ್ತು. ಅದಾದ ನಂತರ 1989ರಲ್ಲಿ 27 ಹಾಗೂ 1991ರಲ್ಲಿ 23 ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಿತ್ತು. ಇದಕ್ಕೆ ಮುನ್ನ 1971ರಲ್ಲಿ ಆಗ ಅಸ್ತಿತ್ವದಲ್ಲಿದ್ದ 27ಕ್ಕೆ 27 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವಿನ ದಡ ಸೇರಿತ್ತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ