Please enable javascript.ಮಣ್ಣಲ್ಲಿ ಮಣ್ಣಾದ ರೈತನಾಯಕ ಕೆ.ಎಸ್‌.ಪುಟ್ಟಣ್ಣಯ್ಯ - Soiled farmer KS Puttannaiah in the soil - Vijay Karnataka

ಮಣ್ಣಲ್ಲಿ ಮಣ್ಣಾದ ರೈತನಾಯಕ ಕೆ.ಎಸ್‌.ಪುಟ್ಟಣ್ಣಯ್ಯ

Vijaya Karnataka 23 Feb 2018, 5:00 am
Subscribe

ರೈತ ಸಾರಥಿ ಚಿರಾಯುವಾಗಲಿ ಅಂತ್ಯ ಸಂಸ್ಕಾರದಲ್ಲಿ ಮೊಳಗಿದ ಘೋಷಣೆ ಸರಕಾರಿ ಗೌರವದೊಂದಿಗೆ ವಿಧಿವಿಧಾನ ವಿಕ ಸುದ್ದಿಲೋಕ ಮಂಡ್ಯ/ಪಾಂಡವಪುರ ರೈತ ನಾಯಕ, ಶಾಸಕ ಕೆಎಸ್‌...

soiled farmer ks puttannaiah in the soil
ಮಣ್ಣಲ್ಲಿ ಮಣ್ಣಾದ ರೈತನಾಯಕ ಕೆ.ಎಸ್‌.ಪುಟ್ಟಣ್ಣಯ್ಯ

ರೈತ ಸಾರಥಿ ಚಿರಾಯುವಾಗಲಿ

ಅಂತ್ಯ ಸಂಸ್ಕಾರದಲ್ಲಿ ಮೊಳಗಿದ ಘೋಷಣೆ

ಸರಕಾರಿ ಗೌರವದೊಂದಿಗೆ ವಿಧಿವಿಧಾನ

ಮಂಡ್ಯ/ಪಾಂಡವಪುರ: ರೈತ ನಾಯಕ, ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಹುಟ್ಟೂರು ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಗ್ರಾಮದ ಅವರ ಜಮೀನಿನಲ್ಲಿ ಧಾರ್ಮಿಕ ವಿಧಿವಿಧಾನ ಹಾಗೂ ಸರಕಾರದ ಸಕಲ ಗೌರವದೊಂದಿಗೆ ಗುರುವಾರ ನೆರವೇರಿತು.

ಪುಟ್ಟಣ್ಣಯ್ಯ ಅವರು ಭಾನುವಾರ ರಾತ್ರಿ ಮೃತಪಟ್ಟರೂ ವಿದೇಶದಲ್ಲಿದ್ದ ಅವರ ಪುತ್ರಿಯರು ಹಾಗೂ ಸೋದರಿಗಾಗಿ ನಾಲ್ಕು ದಿನ ಕಾಯಲಾಗಿತ್ತು. ಸೋಮವಾರ ಬೆಳಗ್ಗೆ ಕ್ಯಾತನಹಳ್ಳಿಯ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಹಾಗೂ ಗಣ್ಯರ ದರ್ಶನಕ್ಕೆ ಅವಕಾಶ ಕಲ್ಪಿಸಿ, ಮಧ್ಯಾಹ್ನದ ವೇಳೆಗೆ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಶೈತ್ಯಾಗಾರದಲ್ಲಿ ಇರಿಸಲಾಯಿತು.

ಮಕ್ಕಳು, ಸೋದರಿ ಹಾಗೂ ಎಲ್ಲ ಸಂಬಂಧಿಕರ ಆಗಮಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಮೈಸೂರಿನಿಂದ ಸೇಂಟ್‌ ಪೀಟರ್ಸ್‌ ಸ್ಥಿರ ಶಾಂತಿ ವಾಹನದಲ್ಲಿ ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಮಾರ್ಗಮಧ್ಯೆ ಶ್ರೀರಂಗಪಟ್ಟಣದಲ್ಲಿ ಕೆಲವೊತ್ತು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಬೆಳಗ್ಗೆ 7.40ರ ವೇಳೆಗೆ ಪಾಂಡವಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಶವವನ್ನು ಬರಮಾಡಿಕೊಂಡು, ತಾಲೂಕು ಆಡಳಿತ, ಪುರಸಭೆ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು.

ಐದು ದೀಪಗಳ ವೃತ್ತದಲ್ಲಿ ನಿವೃತ್ತ ನ್ಯಾ.ಶಿವಪ್ಪ ಅವರು ಅಂತಿಮ ದರ್ಶನ ಪಡೆದರು. ವಿಜಯ ಕಾಲೇಜಿನ ವಿದ್ಯಾರ್ಥಿಗಳು ಬ್ಯಾಂಡ್‌ಸೆಟ್‌ ವಾದನದ ಮೂಲಕ ಅಗಲಿದ ಜನನಾಯಕರಿಗೆ ವಂದನೆ ಸಲ್ಲಿಸಿದರು. ಮಾರ್ಗದುದ್ದಕ್ಕೂ ಸಹಸ್ರಾರು ಜನರು ಕಿಕ್ಕಿರಿದು ನೆರೆದಿದ್ದರು. ಬಳಿಕ ಮಂಡ್ಯ ವೃತ್ತ, ವಿಜಯಾ ಬ್ಯಾಂಕ್‌ ರಸ್ತೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಬಿಇಒ ಕಚೇರಿ ವೃತ್ತದ ಮೂಲಕ ಹಾರೋಹಳ್ಳಿ ರಸ್ತೆಗೆ ಬಂದು ಎಲೆಕೆರೆ ಹ್ಯಾಂಡ್‌ಪೋಸ್ಟ್‌ ಮಾರ್ಗವಾಗಿ ಕ್ಯಾತನಹಳ್ಳಿಗೆ ತರಲಾಯಿತು. ವಾಹನದ ಹಿಂದೆ ಸಾವಿರಾರು ಮಂದಿ ರೈತಸಂಘದ ಕಾರ‍್ಯಕರ್ತರು ಬೈಕ್‌ರಾರ‍ಯಲಿಯಲ್ಲಿ ಸಾಗಿದರು. ಬೆಳಗ್ಗೆ 8.45ಕ್ಕೆ ಕ್ಯಾತನಹಳ್ಳಿಯಲ್ಲಿ ಅವರ ನಿವಾಸದ ಎದುರು ವಾಹನದಲ್ಲೇ ಪುಟ್ಟಣ್ಣಯ್ಯನವರ ಪ್ರಾರ್ಥಿವ ಶರೀರಕ್ಕೆ ಕುಟುಂಬದವರು ಪೂಜೆ ನೆರವೇರಿಸಿದರು. ಬಳಿಕ 9.05 ವೇಳೆಗೆ ಗ್ರಾಮದ ಸರ್‌ಎಂವಿ ಕ್ರೀಡಾಂಗಣಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಎರಡನೇ ಬಾರಿಗೆ ಅವಕಾಶ ಕಲ್ಪಿಸಲಾಯಿತು.

ಪುಟ್ಟಣ್ಣಯ್ಯ ಅವರ ಶರೀರದ ಮೇಲಿದ್ದ ಹಸಿರು ಶಾಲಿನ ಮೇಲೆ ರಾಷ್ಟ್ರಧ್ವಜವನ್ನು ಹೊದಿಸುವ ಮೂಲಕ ಸರಕಾರಿ ಗೌರವ ಸಲ್ಲಿಸಲಾಯಿತು. 11.50ರವರೆಗೆ ಕ್ರೀಡಾಂಗಣದಲ್ಲೇ ಸಹಸ್ರಾರು ಮಂದಿ ಅಭಿಮಾನಿಗಳು, ರೈತ ಸಂಘ ಸೇರಿದಂತೆ ನಾನಾ ಪ್ರಗತಿಪರ ಸಂಘಟನೆಗಳ ಕಾರ‍್ಯಕರ್ತರು, ಸಂಘ ಸಂಸ್ಥೆಗಳ ಮುಖಂಡರು, ಗಣ್ಯರು, ರಾಜಕಾರಣಿಗಳು, ಸಾಹಿತಿಗಳು, ಪ್ರಗತಿಪರ ಚಿಂತಕರು ಪುಟ್ಟಣ್ಣಯ್ಯನವರ ಅಂತಿಮ ದರ್ಶನ ಪಡೆದರು.

ಬಳಿಕ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ 12.30ರ ವೇಳೆಗೆ ಪುಟ್ಟಣ್ಣಯ್ಯನವರ ಪ್ರಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ಅವರ ಜಮೀನಿಗೆ ತರಲಾಯಿತು. ಈ ವೇಳೆ ಶವ ಹೂಳಲು ತೆಗೆದಿದ್ದ ಗುಂಡಿಯ ಸುತ್ತಲೂ ಗೋವಿನ ಸೆಗಣಿ ನೀರನ್ನು ಪ್ರೋಕ್ಷಣೆ ಮಾಡಲಾಯಿತು. 11.35ಕ್ಕೆ ಮೊದಲೇ ಅಂತ್ಯಕ್ರಿಯೆ ಸ್ಥಳದಲ್ಲಿ ಸಿದ್ಧಪಡಿಸಿಕೊಂಡಿದ್ದ ಚಟ್ಟದ ಮೇಲೆ ಪುಟ್ಟಣ್ಣಯ್ಯನವರ ಪ್ರಾರ್ಥಿವ ಶರೀರವನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ಗುಂಡಿ ಸುತ್ತಲೂ ಮೂರು ಸುತ್ತು ಪುಟ್ಟಣ್ಣಯ್ಯನವರ ಪ್ರಾರ್ಥಿವ ಶರೀರವನ್ನು ಪ್ರದಕ್ಷಿಣೆ ಹಾಕಿಸಲಾಯಿತು.

ಪೊಲೀಸ್‌ ವಾದ್ಯತಂಡ ನುಡಿಸಿದ ರಾಷ್ಟ್ರಗೀತೆಯ ಹಿನ್ನೆಲೆ ವಾದ್ಯಸಂಗೀತದೊಂದಿಗೆ 12.30ಕ್ಕೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಸರಕಾರಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಪ್ರತ್ಯೇಕವಾಗಿ ಗೌರವ ಸಮರ್ಪಿಸಿದರು. ರೈತಸಂಘದಿಂದ ಹಸಿರು ಶಾಲನ್ನು ಪುಟ್ಟಣ್ಣಯ್ಯನವರ ಪ್ರಾರ್ಥಿವ ಶರೀರದ ಮೇಲೆ ಹೊದಿಸಿ ಗೌರವ ಸರ್ಪಿಸುತ್ತಿದ್ದಂತೆ 'ಧಿನೇಗಿಲು ಹಿಡಿದು ಹೊಲವನು ಉಳುವ ಯೋಗಿಯ ನೋಡಲ್ಲಿ...' ಗೀತೆಗೀತೆ ಮೊಳಗಿದರು. ಜತೆಗೆ, ಜನಾರ್ಧನ್‌(ಜನ್ನಿ) ಅವರು 'ಧಿಓ ನನ್ನ ಚೇತನ...' ಹಾಡನ್ನು ಹಾಡಿ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರೆ, ಸ್ಥಳದಲ್ಲಿ ನೆರೆದಿದ್ದ ಸಾವಿರಾರು ರೈತಸಂಘದ ಕಾರ‍್ಯಕರ್ತರು ಹಸಿರು ಟವೆಲ್‌ನ್ನು ಗಾಳಿಯಲ್ಲಿ ಬೀಸುತ್ತಾ ನೆಚ್ಚಿನ ನಾಯಕನಿಗೆ ವಿದಾಯ ಹೇಳಿದರು. ಪುಟ್ಟಣ್ಣಯ್ಯ ಅವರ ಪ್ರಾರ್ಥಿವ ಶರೀರಕ್ಕೆ ಪತ್ನಿ ಸುನಿತಾ, ಮಕ್ಕಳಾದ ದರ್ಶನ್‌, ಅಕ್ಷತಾ, ಸ್ಮಿತಾ ಸೇರಿದಂತೆ ಕುಟುಂಬದವರು, ಸಂಬಂಧಿಕರು ಅಂತಿಮವಾಗಿ ಪೂಜೆ ಸಲ್ಲಿಸಿದ ಬಳಿಕ 1.15ರ ವೇಳೆಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕಣ್ಣೀರಿಟ್ಟ ಜನರು: ಪುಟ್ಟಣ್ಣಯ್ಯ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬದವರ ರೋಧನ ಕರುಳು ಹಿಂಡುವಂತಿತ್ತು. ಕ್ರೀಡಾಂಗಣದಲ್ಲಿ ಹಾಗೂ ಅಂತ್ಯಸಂಸ್ಕಾರದ ಸ್ಥಳದಲ್ಲಿ ಅವರ ಅಭಿಮಾನಿಗಳು, ರೈತಸಂಘದ ಕಾರ‍್ಯಕರ್ತರು ತಮ್ಮ ನೆಚ್ಚಿನ ನಾಯಕನ ಅಗಲಿಕೆ ಸಹಿಸಲಾರದೆ ಕಣ್ಣೀರಿಟ್ಟರು.

ಮೊಳಗಿದ ಜಯಘೋಷ: ಅಂತ್ಯಸಂಸ್ಕಾರದ ವೇಳೆ ಅಭಿಮಾನಿಗಳು ಹಾಗೂ ರೈತಸಂಘದ ಕಾರ‍್ಯಕರ್ತರು ಪುಟ್ಟಣ್ಣಯ್ಯ ಅವರಿಗೆ ಜಯಘೋಷ ಮೊಳಗಿಸಿದರು. ಅಪ್ಪಾಜಿಗೆ ಜೈ, ನಕ್ಷತ್ರಕ್ಕೆ ಜೈ, ರೈತ ನಾಯಕರಿಗೆ ಜಯವಾಗಲಿ, ರೈತ ಸಾರಥಿ ಚಿರಾಯುವಾಗಲಿ, ಮಂಡ್ಯದ ಹುಲಿ ಎಂದೆಲ್ಲಾ ಘೋಷಣೆ ಕೂಗಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಮಂಗಳಮುಖಿಯಿಂದ ಪೂಜೆ: ಅಂತ್ಯಸಂಸ್ಕಾರದ ಅಂತಿಮ ಕ್ಷಣದಲ್ಲಿ ಮಂಗಳಮುಖಿಯೊಬ್ಬರು ಆಗಮಿಸಿ ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರಕ್ಕೆ ಪೂಜೆ ನೆರವೇರಿಸಿದರು.

ರಾರಾಜಿಸಿದ ಹಸಿರು ಬಾವುಟ ಮತ್ತು ಶಾಲುಗಳು

ಪುಟ್ಟಣ್ಣಯ್ಯ ಅವರ ಅಂತ್ಯಸಂಸ್ಕಾರದ ವೇಳೆ ಹಸಿರು ಬಾವುಟಗಳು ಮತ್ತು ಶಾಲುಗಳು ರಾರಾಜಿಸಿದವು. ಕ್ರೀಡಾಂಗಣದಲ್ಲಿ ಹಾಕಿದ್ದ ಶಾಮಿಯಾನದ ಪ್ರತಿ ಕಂಬಕ್ಕೂ ಹಸಿರು ಬಾವುಟ ಕಟ್ಟಲಾಗಿತ್ತು. ಇದಲ್ಲದೆ ಪುಟ್ಟಣ್ಣಯ್ಯ ಅವರನ್ನು ಮಣ್ಣು ಮಾಡಿದ ಸ್ಥಳದಲ್ಲೂ ಹಸಿರು ಬಾವುಟವನ್ನು ನೆಡಲಾಗಿತ್ತು. ಅವರ ಪಾರ್ಥಿವ ಶರೀರವನ್ನು ಇಟ್ಟಿದ್ದ ಚಟ್ಟದ ನಾಲ್ಕು ಭಾಗದಲ್ಲೂ ಬಾವುಟ ಕಟ್ಟಲಾಗಿತ್ತು. ಜತೆಗೆ, ರೈತಸಂಘದ ಕಾರ‍್ಯಕರ್ತರು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದ ಹಸಿರು ಟವೆಲ್‌ನ್ನು ಎತ್ತಿಹಿಡಿದು ತಿರುಗಿಸುತ್ತಾ ಪುಟ್ಟಣ್ಣಯ್ಯ ಪರವಾಗಿ ಜಯಘೋಷ ಮೊಳಗಿಸಿದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ